ಸೆಪ್ಟೆಂಬರ್ 17 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8, 9 ,10 ನೇ ತರಗತಿ ಆರಂಭ

ಸೆಪ್ಟೆಂಬರ್ 17 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8, 9 ,10 ನೇ ತರಗತಿ ಆರಂಭ



ಮಂಗಳೂರು, ಸೆ.13: ದ.ಕ. ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಲೆಗಳನ್ನು ತೆರೆಯಬೇಕು. ಮಕ್ಕಳಿಗೆ ತೊಂದರೆಯಾಗ ದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಲೆಗಳನ್ನು ತೆರೆಯುವ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೆ.17ರಂದು 8,9 ಮತ್ತು 10 ನೇ ತರಗತಿಗಳನ್ನು ಆರಂಭಿಸಿ, ಸೆ.20ರಂದು 6 ಮತ್ತು 7ನೇ ತರಗತಿಗಳನ್ನು ಆರಂಭಿಸಲು ಸೂಚಿಸಿದರು. ಜೊತೆಗೆ ಎಲ್ಲ ಪ್ರಥಮ ಪಿ.ಯು.ಸಿ ತರಗತಿಗಳನ್ನು ಆರಂಭಿಸಲು ತಿಳಿಸಿದರು.


ಜಿಲ್ಲೆಯಲ್ಲಿ ಈಗಾಗಲೇ ಶೇ.99ರಷ್ಟು ಶಾಲಾ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಗಿದ್ದು, ಕೋವಿಡ್ ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸಬೇಕು. ಜಿಲ್ಲೆಯಲ್ಲಿ ಈಗಾಗಲೇ 261 ಮಕ್ಕಳು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದು, ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕಂಡುಹಿಡಿದು ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದರು.


ಶಾಲೆಗಳು ಆರಂಭವಾದ ನಂತರ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವಂತೆ ಶಿಕ್ಷಕರು ಸೂಕ್ತ ಮಾಹಿತಿಯನ್ನು ನೀಡಬೇಕು ಎಂದರು.


ಶಾಲೆಗಳು ಆರಂಭವಾದ ನಂತರ ಮಕ್ಕಳಲ್ಲಿ ಶುಲ್ಕ ಪಾವತಿಸಲು ಒತ್ತಾಯಿಸಬಾರದು. ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ಶಾಲೆಯ ಮುಖ್ಯಸ್ಥರು ಒದಗಿಸಬೇಕು. ಶಾಲೆಗಳು ಆರಂಭವಾದ ಬಳಿಕ ಭೌತಿಕ ತರಗತಿಗಳ ಜೊತೆಗೆ ಆನ್‌ಲೈನ್ ತರಗತಿಗಳನ್ನು ಕೂಡ ಮುಂದುವರೆಸಬೇಕು. ಭೌತಿಕ ತರಗತಿಗಳಿಗೆ ಹಾಜರಾಗುವ ಸಂಬಂಧ ಪೋಷಕರ ಅನುಮತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.


ಕಾಲಕಾಲಕ್ಕೆ ಶಿಕ್ಷಕರ ಹಾಗೂ ಶಾಲಾ ಸಿಬ್ಬಂದಿ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕು. ವಿದ್ಯಾರ್ಥಿಗಳ ಕುಟುಂಬದವರ ಆರೋಗ್ಯವನ್ನು ಆಯಾ ಶಿಕ್ಷಣ ಸಂಸ್ಥೆಯು ಗಮನಿಸಬೇಕು. ಅವರಲ್ಲಿ ಕೋವಿಡ್ ಲಕ್ಷಣ ಇಲ್ಲದಿರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ಕೇರಳದಿಂದ ಬರುವ ಮಕ್ಕಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಆನ್‌ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.



Previous Post Next Post